ಓಮ್, ಜಾರ್ಜ್ ಸೈಮನ್: 1787-1854. ಜರ್ಮನ್ ಭೌತವಿಜ್ಞಾನಿ, ವಿದ್ಯುಚ್ಛಕ್ತಿಯ ಕ್ಷೇತ್ರದಲ್ಲಿ ಈತನ ಮೂಲಭೂತ ಸಂಶೋಧನೆಗಳು ಗಮನಾರ್ಹವಾದುವು. ವಿದ್ಯುನ್ಮಂಡಲದ ಬೇರೆ ಬೇರೆ ಭಾಗಗಳಲ್ಲಿ ವಿದ್ಯುಚ್ಚಾಲಕ ಶಕ್ತಿಯ (ಎಲೆಕ್ಟ್ರೋಮೋಟೀವ್ ಫೋರ್ಸ್) ವಿತರಣೆ; ರೋಧತ್ವ (ರೆಸಿಸ್ಟೆನ್ಸ್‌), ವಿದ್ಯುತ್ಪ್ರವಾಹ ತೀವ್ರತೆ (ಎಲಕ್ಟ್ರಿಕ್ ಸ್ಟ್ರೆಂಗ್ತ್‌) ಮತ್ತು ವಿದ್ಯುಚ್ಚಾಲಕ ಶಕ್ತಿ ಇವುಗಳಿಗೆ ಇರುವ ನಿರ್ದಿಷ್ಟ ಸಂಬಂಧವನ್ನು ಪಡೆದು ಅದರ ಸಾಧನೆ ಇವೇ ಓಮನ ಮುಖ್ಯ ಸಂಶೋಧನೆಗಳು.

ಓಮ್ ಜನನ ಜರ್ಮನಿಯ ಎರ್ಲಾಂಗೆನ್ ಎಂಬ ಊರಿನಲ್ಲಿ. ಇವನ ತಂದೆ ಒಬ್ಬ ಪ್ರಸಿದ್ಧನಾದ ಮೆಕ್ಯಾನಿಕ್. ತನ್ನ ಮಗನಿಗೆ ವಿಜ್ಞಾನ ಶಿಕ್ಷಣವನ್ನು ಕೊಡಿಸಬೇಕೆಂದು ಅಪಾರ ಆಸಕ್ತಿ ಇತ್ತು. ಇದರಿಂದ ಓಮ್ಗೆ ಪ್ರಾರಂಭದಿಂದಲೂ ಗಣಿತ ಮತ್ತು ಭೌತವಿಜ್ಞಾನಗಳಲ್ಲಿ ವ್ಯಾಸಂಗವನ್ನು ಮುಂದುವರಿಸುವುದು ಸಾಧ್ಯವಾಯಿತು. ವಿದ್ಯಾಭ್ಯಾಸ ಎರ್ಲಾಂಗೆನ್ ವಿಶ್ವವಿದ್ಯಾನಿಲಯದಲ್ಲಿ. ಮುಂದೆ 1813-17ರವರೆಗೆ ಪಶ್ಚಿಮ ಜರ್ಮನಿಯಲ್ಲಿರುವ ಹ್ಯಾಂಬರ್ಗಿನ ಮಾಧ್ಯಮಿಕ ಶಾಲೆಯೊಂದರಲ್ಲಿ ಭೌತವಿಜ್ಞಾನ ಮತ್ತು ಗಣಿತವಿಜ್ಞಾನದ ಉಪಾಧ್ಯಾಯನಾಗಿಯೂ 1817-26ರವರೆಗೆ ಕೊಲೋನಿನ ಪ್ರೌಢಶಾಲೆಯೊಂದರಲ್ಲಿ ಬೋಧಕನಾಗಿಯೂ ಕೆಲಸಮಾಡಿದ. ಈ ಕಾಲದಲ್ಲಿ ಇವನು ಪ್ರಕಟಿಸಿದ ವೈಜ್ಞಾನಿಕ ಲೇಖನಗಳಲ್ಲಿ ಬೆಳೆಸಿದ ಹೊಸ ವಾದಗಳಿಗೆ ವೈಜ್ಞಾನಿಕ ಮನ್ನಣೆ ಲಭಿಸಲಿಲ್ಲ. ಆದ್ದರಿಂದ ಓಮ್ ತಲೆತಗ್ಗಿಸುವಂತಾಗಿ ಮುಂದಿನ ಆರು ವರ್ಷಗಳವರೆಗೆ ಮನೆ ಮೇಷ್ಟ್ರಾಗಿ ಇಂಗ್ಲೆಂಡಿನಲ್ಲಿಯೂ ಬರ್ಲಿನ್ನಿನ ಮಿಲಿಟರಿ ಅಕಾಡೆಮಿಯಲ್ಲಿಯೂ ಕೆಲಸಮಾಡಿದ. ಆದರೆ ವಿದ್ಯುತ್ಪ್ರಕರಣದಲ್ಲಿ ಓಮನ ನಿಯಮವೆಂದು ಕರೆಯುವ ನಿಯಮವನ್ನು 1826ರಲ್ಲಿ ಪ್ರಚುರಪಡಿಸಿ ಪ್ರಸಿದ್ಧಿಹೊಂದಿದ. ಇದನ್ನು ಗಮನಿಸಿದ ರಾಯಲ್ ಸೊಸೈಟಿಯು ಕೋಪ್ಲಿ ಪದಕವನ್ನು ನೀಡಿ ಓಮನನ್ನು ಗೌರವಿಸಿತು (1841). ಅಲ್ಲದೇ ಮರುವರ್ಷ (1842) ಓಮನನ್ನು ತನ್ನ ಪರದೇಶದ ಸದಸ್ಯನನ್ನಾಗಿಯೂ ಆರಿಸಿತು. 1833ರಲ್ಲಿ ಇವನನ್ನು ನ್ಯೂರೆನ್ಬರ್ಗಿನಲ್ಲಿರುವ ಪಾಲಿಟೆಕ್ನಿಕ್ ಶಾಲೆಯ ನಿಯಂತ್ರಕನನ್ನಾಗಿ ನೇಮಿಸಿದರು. ಮ್ಯೂನಿಚ್ ವಿಶ್ವವಿದ್ಯಾಲಯದ ಭೌತವಿಜ್ಞಾನದ ಮಹೋಪಾಧ್ಯಾಯ ಪೀಠ ಈತನಿಗೆ 1849ರಲ್ಲಿ ಲಭಿಸಿತು. ಮುಂದಿನ ವರ್ಷಗಳಲ್ಲಿ ಈ ಪೀಠವನ್ನು ಅಲಂಕರಿಸಿದವರು ರಂಟ್ಜನ್, ಸಮ್ಮರ್ಫಿಲ್ಡ್‌, ಡೀಬೈ ಮೊದಲಾದ ಸುಪ್ರಸಿದ್ಧ ವಿಜ್ಞಾನಿಗಳೆಂದು ಇಲ್ಲಿ ಸ್ಮರಿಸಬಹುದು. 1852ರ ವರೆಗೆ ಮ್ಯೂನಿಚ್ ವಿಶ್ವವಿದ್ಯಾಲಯದ ಮಹೋಪಾಧ್ಯಾಯ ಪೀಠದಲ್ಲಿಯೇ ಇದ್ದು 1854 ಜುಲೈ 7ರಂದು ಓಮ್ ನಿಧನಹೊಂದಿದ.

ಜೀವನದ ಉತ್ಪಾದಕ ವರ್ಷಗಳಲ್ಲಿ ಹಣಕಾಸಿನ ತೊಂದರೆ ಓಮನಿಗೆ ಬಹಳವಾಗಿದ್ದುದರಿಂದ ಇವನು ಉಪಯೋಗಿಸುತ್ತಿದ್ದ ಪ್ರಾಯೋಗಿಕ ಉಪಕರಣಗಳು ಸಾಕಷ್ಟು ಸೂಕ್ಷ್ಮವಾಗಿರದೆ ಬಹಳ ಒಡ್ಡಾಗಿರುತ್ತಿದ್ದುವು. ಆದ್ದರಿಂದ ಇವನ ಸಂಶೋಧನೆಗಳು ಮೊದಮೊದಲಲ್ಲಿ ಅಪ್ರಧಾನವಾದ ಪ್ರಕಟಣೆಗಳಲ್ಲಿ ಮಾತ್ರ ಕಂಡುಬಂದುವು. ಇವನ ಅತ್ಯಂತ ಮಹತ್ತ್ವಪುರಿತವಾದ ಕೊಡುಗೆ ವಿದ್ಯುತ್ತು ಏಕಮುಖವಾಗಿ ಹರಿಯುತ್ತಿದ್ದಾಗ ಅದರ ಹರಿವಿನ ಬಗ್ಗೆ ತಿಳಿಯಬಹುದಾದ ಸಂಶೋಧನೆಗಳಿಗೆ ಸಂಬಂಧಿಸಿದ್ದು. ವಿದ್ಯುತ್ತನ್ನು ದ್ರವಗಳ ಮೂಲಕ ಹರಿಸಿ ಅವುಗಳ ವಾಹಕತ್ವವನ್ನು ಅಳೆಯಲು ಇವನು ಅನೇಕ ಪ್ರಯೋಗಗಳನ್ನು ಮಾಡಿದ. ಮುಂದೆ ಇವನ ಆಸಕ್ತಿ ದ್ಯುತಿವಿಜ್ಞಾನ ಮತ್ತು ಶ್ರವಣವಿಜ್ಞಾನಗಳ ಸಂಶೋಧನೆಗಳಿಗೆ ತಿರುಗಿತು. ಅಲ್ಲಿ ಹರಳುಗಳಲ್ಲಾಗುವ ವ್ಯತಿಕರಣವನ್ನು (ಇಂಡರ್ಫಿಯರೆನ್ಸ್‌ ಇನ್ ಕ್ರಿಸ್ಟಲ್ಸ್‌) ಪ್ರಯೋಗಗಳ ಮೂಲಕ ಈತ ಅಭ್ಯಸಿಸಿದ. ಲೋಹಗಳ ಮೂಲಕ ಸಂಪರ್ಕ ವಿದ್ಯುತ್ತು ಹಾಯುವಾಗ ಅದು ಅನುಸರಿಸುವ ನಿಯಮಗಳನ್ನು ಸಾಧಿಸುವುದು ಹೇಗೆ ಎಂಬ ಗ್ರಂಥವನ್ನು 1826ರಲ್ಲೂ ಏಕಮುಖ ವಿದ್ಯುತ್ಪ್ರವಾಹದ ಗಣಿತೀಯ ಸಂಶೋಧನೆ ಎಂಬ ಗ್ರಂಥವನ್ನು 1827ರಲ್ಲೂ ಪ್ರಕಟಿಸಿದ. ಭೌತವಿಜ್ಞಾನದ ಆಧಾರ ತತ್ತ್ವಗಳು ಎಂಬುದು ಇವನು ಸಾಯುವ ಮೊದಲು ಪ್ರಕಟಿಸಿದ ಗ್ರಂಥ 1854  	(ನೋಡಿ- ಓಮನ-ನಿಯಮ).	(ಸಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ